in

Dating : ಗುರುವಿನ ಗುಲಾಮನಾಗುವತನಕ……

h2>Dating : ಗುರುವಿನ ಗುಲಾಮನಾಗುವತನಕ……

Vadiraj Nanjangud

ರವಿವಾರವಾಗಿದ್ದರೂ ಬೆಳಿಗ್ಗೆ ಬೇಗ ಎದ್ದು ಪ್ರಾತಃಕಾಲದ ವಿಧಿಗಳನ್ನೆಲ್ಲ ಮುಗಿಸಿ dining table ಹತ್ತಿರ ಹೋಗಿ “ತಿಂಡಿ ಸಿದ್ಧವಾಗಿದೆಯಾ?” ಎಂದು ಹೆಂಡತಿಯನ್ನು ವಿಚಾರಿಸಿದೆ. ಅವಳು ಅಡಿಗೆ ಮನೆಯಿಂದಲೇ , “ ಪ್ರತಿದಿನದ ತಿಂಡಿಯ ಸಮಯ ಆಗಿಲ್ಲ . ಏನು ಗಡಿಬಿಡಿ ?” ಎಂದು ಕೇಳಿದಳು. “ನಿನಗೆ ನಿನ್ನೆ ರಾತ್ರಿ ಹೇಳಿದ್ದು ಮರೆತು ಹೋಯಿತೇ ?” ಎಂದು ಅಚ್ಚರಿ ವ್ಯಕ್ತಪಡಿಸಿದೆ. ಇನ್ನೇನು ಒಂದು ತಾಸಿನಲ್ಲಿ ನಮ್ಮ ಗುರು Skype call ಮಾಡ್ತಾನೆ. ಅಷ್ಟರಲ್ಲಿ ತಿಂಡಿ ಮುಗಿಸಿ ಕುಳಿತರೆ ಆರಾಮವಾಗಿ ಮಾತನಾಡಬಹುದು ಎಂದು ನಾನು ಉತ್ತರಿಸಿದೆ . ಅವಳು “ಆಯಿತು ತಿಂಡಿ ಸಿದ್ಧವಾಗಿದೆ. ಚಟ್ನಿ ಒಂದನ್ನು ಮಿಕ್ಸಿಗೆ ಹಾಕಿದರೆ ಆಯಿತು.” ಎಂದಳು.

ಗುರು ಅಂದರೆ ಗುರುರಾಜ ನನ್ನ ತಮ್ಮ ವಿವೇಕನ ಮಗ. ಬ್ಯಾಂಕ್ ಒಂದರಲ್ಲಿ ಹಿರಿಯ ಅಧಿಕಾರಿಯಗಿದ್ದ ವಿವೇಕ ಈಗ ತನ್ನ ಹೆಂಡತಿ ರಾಧಿಕಳೊಂದಿಗೆ ಹೈದರಾಬಾದನಲ್ಲಿ ವಾಸಿಸುತ್ತಿದ್ದಾನೆ. ವರ್ಗಾವಣೆಗೊಂಡು ಕೆಲವು ವರ್ಷಗಳ ಹಿಂದೆ ಮುಂಬೈಗೆ ಬಂದಿದ್ದ. ಅವನ ಬಾಡಿಗೆ ಮನೆ ನನ್ನ ಸ್ವಂತ ಮನೆಯ ಹತ್ತಿರ ಇತ್ತು ಮತ್ತು ಪರಸ್ಪರ ಹೋಗಿ ಬರಲು ತುಂಬಾ ಅನುಕೂಲವಾಗಿತ್ತು. ಮುಂಬೈಗೆ ಬಂದು ಒಂದು ವರ್ಷದ ನಂತರ ಗುರು ಜನಿಸಿದ. ಅವನು ಹುಟ್ಟಿದ್ದು ಗುರುವಾರದಂದು. ಆದುದರಿಂದ ಅವನಿಗೆ ಗುರುರಾಜ ಎಂದು ನಾಮಕರಣ ಮಾಡಿದ್ದರು. ಗುರು ಹುಟ್ಟಿದಾಗ ನನ್ನ ಮಗಳು ಸುನಂದಾಗೆ ಹನ್ನೊಂದು ವರ್ಷ. ಅವಳಿಗೆ ಇವನನ್ನು ಕಂಡರೆ ತುಂಬಾ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ಅವನ ಮನೆಗೆ ಹೋಗಿ ತೃಪ್ತಿಪಡುವಷ್ಟು ಆಡಿಸಿ ಮುದ್ದು ಮಾಡಿ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಅವನು ಅಷ್ಟೇ ಅಕ್ಕನನ್ನು ಕಂಡರೆ ತಾಯಿಯ ಮಡಿಲಿನಿಂದ ಜಿಗಿದು ಬರುತ್ತಿದ್ದ. ಬೇರೆ ಮಕ್ಕಳು ನನ್ನ ಮಗಳನ್ನು ಸುನಂದಕ್ಕ ಎಂದು ಕರೆಯುತ್ತಿದ್ದರು. ಗುರು ಮಾತನಾಡಲು ಆರಂಭಿಸಿದಾಗ ಸುನಂದಕ್ಕ ಇವನ ಬಾಯಿಯಲ್ಲಿ ನಂದಕ್ಕ ಆಗಿ ಬಿಟ್ಟಿದ್ದಳು. ಈಗಲೂ ಅವನು ಅವಳನ್ನು ಹಾಗೆಯೇ ಸಂಭೋದಿಸುವುದುಂಟು. ಅವನ ಹುಟ್ಟಿದ ಹಬ್ಬಕ್ಕೆ ನಂದಕ್ಕ ಹೋಗುವವರೆಗೆ ಕೇಕ್ ಕತ್ತರಿಸುವ ಕಾರ್ಯಕ್ರಮ ಶುರು ಆಗುತ್ತಿರಲಿಲ್ಲ. ಗುರು ಐದು ವರ್ಷದವನಿದ್ದಾಗ ನನ್ನ ತಮ್ಮನಿಗೆ ಬೇರೆ ಊರಿಗೆ ವರ್ಗಾವಣೆ ಆಯಿತು. ಅನಿವಾರ್ಯದ ಈ ಅಗಲುವಿಕೆ ಭಾವಪೂರ್ಣವಾಗಿತ್ತು.

ಅನಂತರ ಗುರು ಮುಂಬೈಗೆ ಬಂದದ್ದು ಸುನಂದಾಳ ಮದುವೆಯ ಸಮಯದಲ್ಲಿ. ಆಗ ಅವನು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದ. ಒಳ್ಳೆಯ ಅಂಗ ಸೌಷ್ಟವದೊಂದಿಗೆ ಚಿಗುರು ಮೀಸೆಯ ತರುಣನಾಗಿ ಆಕರ್ಷಕ ವ್ಯಕಿತ್ವವನ್ನು ಪಡೆದುಕೊಂಡಿದ್ದ. ಮದುವೆಗೆ ಎರಡು ದಿನ ಮೊದಲೇ ಬಂದು ನನ್ನ ಬಲಗೈಯಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಂಭ್ರಮ ಪಟ್ಟಿದ್ದ. ಲಾಜಾಹೋಮದ ಸಮಯದಲ್ಲಿ ನಾಯಕನಾಗಿ ಮಿಂಚಿದ್ದ. ತಾನು ಅಕ್ಕನ ಬೊಗಸೆಗೆ ಅರಳು ಹಾಕುವ ಫೋಟೋ ಮತ್ತು ವೀಡಿಯೊ ಪೋಸ್ ಕೊಟ್ಟು ತೆಗೆಸಿಕೊಂಡಿದ್ದ. ಸುನಂದಾಳನ್ನು ಅವಳ ಪತಿಯ ಊರಾದ ಪುಣೆಗೆ ಬೀಳ್ಕೊಡುವಾಗ ಗುರು ಕೂಡ ಭಾವುಕನಾಗಿ ಕಣ್ಣಿನ ಅಂಚಿನಲ್ಲಿ ನೀರು ತುಂಬಿಕೊಂಡಿದ್ದನ್ನು ನಾನು ಗಮನಿಸದೆ ಇರಲಿಲ್ಲ.

ಮುಂದೆ ಎರಡು ವರ್ಷಗಳಲ್ಲಿ ಗುರು ತನ್ನ XIIನೇ ತರಗತಿಯನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿದ್ದ. ಜೊತೆ ಜೊತೆಗೆ IIT entrance ಪರೀಕ್ಷೆಯಲ್ಲಿ ಪಾಸಾಗಿದ್ದ. ಅವನಿಗೆ ಇಷ್ಟವಾದ ಮೆಕ್ಯಾನಿಕಲ್ ವಿಭಾಗದಲ್ಲಿ IIT ಮುಂಬೈಯಲ್ಲಿ ಸೀಟು ಪಡೆದುಕೊಂಡಿದ್ದ. ನಮ್ಮ ಕುಟುಂಬದಲ್ಲಿ IIT ಸೀಟು ಪಡೆಯುವದರಲ್ಲಿ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ.

IIT ಗೆ ಸೇರಿದ ಹೊಸತರಲ್ಲಿ ನಮ್ಮ ಮನೆಯಲ್ಲಿ ವಾಸವಾಗಿದ್ದು, ಕಾಲೇಜಿಗೆ ಹೋಗಿ ಬರುತಿದ್ದ. ಮುಂದೆ ಸ್ವಲ್ಪ ದಿನಗಳ ನಂತರ ಹಾಸ್ಟೆಲ್ ಸೇರಿದ. ಹಾಸ್ಟೆಲಗೆ ಸೇರಿದ ಮೇಲೂ , ವಾರಾಂತ್ಯದಲ್ಲಿ ಬಿಡುವಾದಾಗ ಆಗಾಗ ಬಂದು ಹೋಗುತ್ತಿದ್ದ. ಪುಣೆಗೆ ಹೋದಾಗ ನನ್ನ ಮಗಳ ಮನೆಗೆ ಹೋಗದೆ ಇರುತ್ತಿರಲಿಲ್ಲ. ಅವಳು ಅಷ್ಟೇ , ಮುಂಬೈಗೆ ಬರುವ ಸುದ್ದಿಯನ್ನು ನಮಗಿಂತ ಮುಂಚೆ ಅವನಿಗೆ ತಿಳಿಸುತ್ತಿದ್ದಳು. ಆ ಪ್ರಕಾರ ಅವರಿಬ್ಬರೂ ಭೇಟಿಯಾಗಿ ಮನಸಾರೆ ಹರಟೆ ಹೊಡೆಯುತ್ತಿದ್ದರು.

ಹೀಗೆ ಕಾಲಚಕ್ರ ಉರುಳುತ್ತಾ, ಉರುಳುತ್ತಾ ಅವನ B.Tech. ಪದವಿ ಮುಕ್ತಾಯ ಹಂತಕ್ಕೆ ಬಂದಿತ್ತು. ಅವನು ಇನ್ನೂ ಹೆಚ್ಚಿನ ವಿದ್ಯಾಭ್ಯಾಸವನ್ನು ಅಮೇರಿಕಾದ ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಸಲು ನಿರ್ಧರಿಸಿದ್ದ. ಅದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದ. ನನ್ನ ತಮ್ಮ ಕೇವಲ ಬುದ್ಧಿವಂತ ಮಾತ್ರ ಆಗಿರದೆ, ವ್ಯವಹಾರ ಕುಶಲಿಯು ಆಗಿದ್ದ. ಕಾಲ ಕಾಲಕ್ಕೆ ಸರಿಯಾದ ಮಾರ್ಗದರ್ಶನ ಮಾಡಿ ಮುನ್ನಡೆಸಿದ್ದ. ಆದರೂ ಗುರುವಿಗೆ ನಾನು ಎಂದರೆ ಶುಭ ಶಕುನ ಇದ್ದಂತೆ. ಯಾವುದೇ ಒಳ್ಳೆಯ ಕೆಲಸ ಮಾಡಬೇಕು ಎಂದು ಎನಿಸಿದಾಗ ನನ್ನ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದ. ನನ್ನ ಹಾರೈಕೆಯಿದ್ದರೆ ಅವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅವನು ಬಲವಾಗಿ ನಂಬಿದ್ದ. GRE ಪರೀಕ್ಷೆ ಬರೆಯುವ ಮೊದಲು ಮತ್ತು ಅಮೇರಿಕಾ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪತ್ರಗಳನ್ನು ಸಲ್ಲಿಸುವ ಮುನ್ನ ನಮ್ಮನ್ನು ಮುಖತಃ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದ.

ಅವನ B.Tech. ಪದವಿಯ ಅಂಕಗಳು ಮತ್ತು ಇತರ ಮಾನದಂಡಗಳ ಆಧಾರದ ಮೇಲೆ ಅವನಿಗೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ M.S. ಪದವಿ ಅಧ್ಯಯನಕ್ಕೆ ಪ್ರವೇಶ ಸಿಕ್ಕಿತು. ಅಧ್ಯಯನದ ಒಂದೂವರೆ ವರ್ಷದ ಬಳಿಕ ಪ್ರಸಿದ್ಧ ಕಂಪನಿಯಲ್ಲಿ internship ಮಾಡಲು ಆಯ್ಕೆಯಾದ. ಆ ಕಂಪನಿಯು ವಿಶಿಷ್ಟ ಬಳಕೆಯ ವಿಶೇಷ drone ಗಳನ್ನು ತಯಾರಿಸುತ್ತಿತ್ತು. ಸಫಲವಾಗಿ internship ಪೂರೈಸಿದ ತರುವಾಯ ಅದೇ ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತು. M.S. ಪದವಿಯನ್ನು ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತ ಇದ್ದಾನೆ. ವೇತನ ಮತ್ತು ಕೆಲಸ ಕಾರ್ಯಗಳಲ್ಲಿ ತೃಪ್ತಿ ಇದ್ದರೂ ಇತ್ತೀಚೆಗೆ electric car ಕಂಪನಿ ಒಂದಕ್ಕೆ ಸಂದರ್ಶನ ನೀಡಿದ್ದ. ಅದಕ್ಕೂ ಮುನ್ನ ಒಂದು ವಾರದ ಹಿಂದೆ ಫೋನ್ ಮಾಡಿ ಆಶೀರ್ವಾದ ಪಡೆಯಲು ಮರೆತಿರಲಿಲ್ಲ. ಬಹುಶಃ ಅದರ ಮುಂದುವರಿಕೆಯಾಗಿ ಏನೋ ಹೇಳಲು ಬಯಸಿರಬಹುದು ಅಂತ ಅಂದುಕೊಂಡೆ.

ಮೇಜಿನ ಮೇಲೆ ಇಟ್ಟ ತಟ್ಟೆಯ ಶಬ್ದಕ್ಕೆ ನಾನು ಆಲೋಚನಾ ಲಹರಿಯಿಂದ ಹೊರಗೆ ಬಂದೆ. ತಟ್ಟೆಯಲ್ಲಿ ಹಬೆಯಾಡುತ್ತಿದ್ದ ಬಿಸಿ ಬಿಸಿ ಇಡ್ಲಿಗಳು ಚಟ್ನಿ ಯೊಂದಿಗೆ ರಾರಾಜಿಸುತ್ತಿದ್ದವು. “ಬಿಸಿ ಇಡ್ಲಿ ಜೊತೆ ಬೆಣ್ಣೆ ಇದ್ದಿದ್ದರೆ ….” ಎಂದು ಸಣ್ಣದಾಗಿ ರಾಗ ಎಳೆದೆ. ನನ್ನ cholesterol ಸಮಸ್ಯೆಯಿಂದಾಗಿ ಬೆಣ್ಣೆ , ತುಪ್ಪ ಬಡಿಸುವುದು ಅಷ್ಟಕಷ್ಟೆ. ನನ್ನ ಅದೃಷ್ಟವೋ ನನ್ನಾಕೆ ಸಣ್ಣ ಬಟ್ಟಲಿನಲ್ಲಿ ಬೆಣ್ಣೆಯ ಮುದ್ದೆಯನ್ನು ಇಟ್ಟು ತಟ್ಟೆಯ ಮುಂದೆ ತಂದಿಟ್ಟಳು. ಗುರುವಿನ ನಿರೀಕ್ಷಿತ ಫೋನಿನ ಪರಿಣಾಮ ಇದ್ದರೂ ಇರಬಹದು ಎಂದುಕೊಂಡೆ. ಕೃತಜ್ಞತೆ ಸೂಚಿಸಲು “ ಬಾ ನೀನು ನನ್ನೊಂದಿಗೆ ತಿಂಡಿ ತಿನ್ನು ” ಎಂದು ಹೇಳಿದೆ. “ ಉಪಚಾರ ಸಾಕು. ತಿಂಡಿ ಮುಗಿಸಿದ ತಕ್ಷಣ ನಿಮಗೆ ಚಹಾ ಬೇಕು. ಚಹಾ ಮಾಡಿ ಮುಗಿಸಿಯೇ ಬರುವೆ ” ಎಂದು ಹೇಳಿದಳು. ನನ್ನ ತಿಂಡಿ ಪೂರೈಸಿ, ಚಹಾ ಕುಡಿದು ಹಾಲಿಗೆ ಬಂದೆ. Laptop ನಲ್ಲಿ Skype app ಅನ್ನು ಲೋಡ್ ಮಾಡಿ login ಆಗಿ ಗುರುವಿನ call ಗಾಗಿ ಕಾಯುತ್ತಾ ಕುಳಿತೆ.

ಸರಿಯಾಗಿ ಹತ್ತು ಗಂಟೆಗೆ ಗುರುವಿನ Skype ಫೋನ್ ರಿಂಗುಣಿಸಿತು. ಅದು ವೀಡಿಯೊ ಕಾಲ್ ಆಗಿದ್ದರಿಂದ ಅವನ ಮುಖ ಮತ್ತು ಹಿನ್ನೆಲೆಯಲ್ಲಿ ಅವನ ಕೋಣೆ ಸುಂದರವಾಗಿ ಮೂಡಿ ಬಂದಿದ್ದವು.

“ಹಾಯ್ ಕಾಕಾ, ಹೇಗಿದ್ದೀರಿ “ಬಲಗೈ ಬೀಸುತ್ತ ಸಂಭಾಷಣೆ ಆರಂಭಿಸಿದ.

“ಹಲೋ , ನಾವು ಆರಾಮವಾಗಿ ಇದ್ದೀವಿ. ನೀ ಹೆಂಗಿದಿಯಪ್ಪಿ ?” ಕೈಬೀಸುತ್ತ ನಾನು ಅಕ್ಕರೆಯಿಂದ ಕೇಳಿದೆ. ಅಪ್ಪಿ ಎಂಬುದು ಗುರುವನ್ನು ಪ್ರೀತಿಯಿಂದ ಕರೆಯುವ ಇನ್ನೊಂದು ಹೆಸರು.

“ನಾನೂ First Class ಆಗಿದ್ದೀನಿ . ವಾರದ ಅತ್ಯಂತ ಆರಾಮದ ದಿನ ಎಂದರೆ ಶನಿವಾರ. ಶುಕ್ರವಾರ ರಾತ್ರಿ ಆರಂಭವಾಗಿ ಪೂರ್ತಿ ಶನಿವಾರ ಮತ್ತು ರವಿವಾರದ ಮುಂಜಾನೆಯ ಅರ್ಧ ದಿನ ಹಿತವಾಗಿರುತ್ತದೆ. ರವಿವಾರ ಸಂಜೆಯಾಗುತ್ತಿದ್ದಂತೆ ಸೋಮವಾರ ನೆನಪಾಗಿ ಉತ್ಸಾಹ ಎಲ್ಲಾ ಠುಸ್ ಆಗಿ ಬಿಡುತ್ತದೆ.”

“ಏನೋ ವಿಶೇಷ ಸುದ್ದಿ ಇದೆ ಅಂತ ಮೆಸೇಜ್ ಕಳಿಸಿದ್ಯಲ್ಲ?” ಎಂದು ನಾನು ವಿಷಯಕ್ಕೆ ಬಂದೆ.

“ಅದೇ ಕಾಕಾ, ನಾನು ಹೋದ ವಾರ electric car company ಇಂಟರ್ವ್ಯೂಗೆ ಹಾಜರಾಗಿದ್ದು ತಿಳಿಸಿದ್ದೆ. ಅಲ್ಲಿ select ಆಗಿನಿ. ನಿನ್ನೆ ಅವರು ಖಚಿತ ಪಡಿಸಿದರು. ಎಲ್ಲಾ ನಿಮ್ಮ ಆಶೀರ್ವಾದ . ಇಲ್ಲೂ ಹುಸಿ ಹೋಗಲಿಲ್ಲ ನೋಡ್ರಿ.”

“ಅಭಿನಂದನೆಗಳು, ನಿನ್ನ ಪರಿಶ್ರಮ ನಿಮ್ಮ ಅಪ್ಪ ಅಮ್ಮನ ಆಶೀರ್ವಾದ ನಿನ್ನ ಯಶಿಸ್ಸಿಗೆ ಕಾರಣ . ದೇವರು ನಿನಗೆ ಉತ್ತರೋತ್ತರ ಅಭಿವೃದ್ಧಿಯನ್ನು ಕರುಣಿಸಲಿ ”ಎಂದು ಹಾರೈಸಿದೆ.

“ಹೆಂಗಸಿನ ವಯಸ್ಸು , ಗಂಡಸಿನ ಪಗಾರ ಕೇಳಬಾರದು ಅನ್ನೋದು ಹಳೆಯ ಗಾದೆ ಮಾತು. ಆದರೂ ಕುತೂಹಲ . ಈ ಹೊಸ ಕೆಲಸದಾಗ ಪಗಾರ ಎಷ್ಟಪ್ಪಿ? ”ಎಂದು ಕಾತುರತೆಯಿಂದ ಕೇಳಿದೆ.

“ಕಾಕಾ,ನಿಮಗ ಪಗಾರ ಹೇಳೂದರಾಗ ನನಗ ಏನೂ ತ್ರಾಸ ಅನಸಂಗಿಲ್ಲ. ಯಾಕಂದರ ನೀವು ಬ್ಯಾರೆ ಯಾರಿಗೂ ಹೇಳಂಗಿಲ್ಲ. ಕಾಕೂಗೂ ಹೇಳಂಗಿಲ್ಲ ಅನ್ನೋ ಖಾತ್ರಿ ಅದ.” ಎನ್ನುತ್ತಾ ಪಗಾರ ಹೇಳಲೇ ಇಲ್ಲ.

“ಇಲ್ಲಿ ಪಗಾರ ಪರಸ್ಪರ ಚರ್ಚೆ ಮಾಡಿ ನಿಶ್ಚಯಿಸಲಾಗುತ್ತದೆ” ಎಂದು ಮುಂದುವರೆಸಿದ. ನನಗೆ ವಿಸ್ಮಯವೆನಿಸಿತು. ನಮ್ಮಲ್ಲಿ ವಿದ್ಯಾರ್ಹತೆ,ಹುದ್ದೆ ಆಧಾರದ ಮೇಲೆ ವೇತನ ಶ್ರೇಣಿಗೆ ಅನುಗುಣವಾಗಿ ಪೂರ್ವ ನಿರ್ಧಾರಿತವಾಗಿರುತ್ತವೆ. ಚರ್ಚೆಗೆ ಅವಕಾಶವೆಲ್ಲಿ?

ವಿವರ ತಿಳಿಯಲು “ಸ್ವಲ್ಪ ಬಿಡಿಸಿ ಹೇಳು” ಎಂದೆ.

“ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಮೇಲೆ , ಅಪೇಕ್ಷಿತ ಸಂಬಳವನ್ನು ತಿಳಿಸಲು ಸೂಚಿಸುತ್ತಾರೆ. ಅದನ್ನು ಹಿಂದೆ ಮುಂದೆ ಮಾಡಿ ಚರ್ಚಿಸಿ ಒಂದು ಅಂತಿಮ ಪ್ಯಾಕೇಜ್ ತಿಳಿಸುತ್ತಾರೆ. ಅದು ಒಪ್ಪಿಗೆಯಾದರೆ ನಾವು ಹೊಸ ಕೆಲಸಕ್ಕೆ ಸೇರಿಕೊಳ್ಳಬಹುದು. ಈ ಎಲ್ಲಾ ಪ್ರಕ್ರಿಯೆ ಒಂದು ವಾರದ ವರೆಗೆ ನಡೆಯಬಹುದು ”

ನನ್ನ ಜಿಜ್ಞಾಸೆ ಇನ್ನೂ ಹೆಚ್ಚಾಯಿತು. ”ನೀನು ನಿನ್ನ ಅಪೇಕ್ಷಿತ ಸಂಬಳವನ್ನು ತಿಳಿಸಿ ಆಯಿತೆ ?” ಎಂದು ಪ್ರಶ್ನಿಸಿದೆ.

“ಈ ಎಲ್ಲಾ ಪ್ರಕ್ರಿಯೆ ಸೋಮವಾರದಿಂದ ಪ್ರಾರಂಭ ಆಗುವದು . ಸಾಮಾನ್ಯವಾಗಿ ಯಾರೂ ತಮ್ಮ ಅಪೇಕ್ಷಿತ ಸಂಬಳವನ್ನು ಮೊದಲು ತಿಳಿಸುವದಿಲ್ಲ. ಕಂಪನಿಯವರಿಗೆ ತಮ್ಮ ಮೊದಲ ನಡೆಯನ್ನು ನಡೆಸಲು ಸೂಚಿಸುತ್ತಾರೆ. ಅವರು ಕೊಟ್ಟ ಅಂಕೆಯನ್ನು ವಿಶ್ಲೇಷಿಸಿ ಚರ್ಚೆಯನ್ನು ಮುಂದುವರೆಸುತ್ತಾರೆ.’ ಇದರ ಹಿಂದಿರುವ ತರ್ಕವನ್ನು ಒಂದು ಉದಾಹರಣೆಯ ಮೂಲಕ ವಿವರಿಸಿದ.

“ಕಂಪನಿಯವರು ನನಗೆ ೨೫ ಲಕ್ಷದ ಪ್ಯಾಕೇಜ್ ಕೊಡಲು ನಿರ್ಧರಿಸಿರಬಹುದು ಅಂದುಕೊಳ್ಳಿ . ನಾನು ಅಪೇಕ್ಷಿತ ಸಂಬಳ ೨೦ ಲಕ್ಷ ಎಂದು ತಿಳಿಸಿದರೆ ಅವರು ಚರ್ಚೆ ಮಾಡಿ ೧೮ ರಿಂದ ೨೨ ಲಕ್ಷ ಪ್ಯಾಕೇಜ್ ನಿರ್ಧರಿಸಬಹುದು. ಆಗ ನಷ್ಟ ನನಗೆ ತಾನೇ. ಇನ್ನು ನಾನು ನನ್ನ ಅಪೇಕ್ಷಿತ ಸಂಬಳ ೪೦ ಲಕ್ಷ ಎಂದು ತಿಳಿಸಬಹುದು. ಆಗ ನನ್ನ ಪ್ರಸ್ತುತ ಮಾರುಕಟ್ಟೆಯ ಅಜ್ಞಾನವನ್ನು ನಾನೇ ಪ್ರದರ್ಶಿಸಿದ ಹಾಗೆ ಆಗುತ್ತದೆ. ಹೇಗೆ ನೋಡಿದರೂ ನಷ್ಟ ನನಗೆ ಮಾತ್ರ. ಮೇಲಾಗಿ ನಿಖರವಾಗಿ ಅವರ ನಿರ್ಧಾರವನ್ನು ಊಹಿಸುವುದು ಬಲು ಕಷ್ಟ. ಆದುದರಿಂದ ಮೊದಲ ನಡೆಯನ್ನು ಅವರಿಗೆ ಬಿಡುವದು ಉಚಿತ ”ಎಂದು ಸುದೀರ್ಘವಾಗಿ ತಿಳಿಸಿದ.

“ಭಲೆ, ವ್ಯವಹಾರ ಕುಶಲತೆಯಲ್ಲಿ ನಿಮ್ಮ ಅಪ್ಪನನ್ನೂ ಮೀರಿಸುತ್ತಿ ”ಎಂದು ಅಭಿನಂದಿಸಿದೆ.

“ಕಾಕಾ , ನನಗ ಒಳ್ಳೆಯದಾಗಲಿ ಅಂತ ಆಶೀರ್ವಾದ ಮಾಡಿ “ ಎಂದು ಕೈ ಮುಗಿದ. “ಚರ್ಚೆ ಮುಗಿದ ಮೇಲೆ update ಮಾಡ್ತೀನಿ ” ಎಂದ. ಅಷ್ಟರಲ್ಲಿ ನನ್ನ ಪತ್ನಿ ಬಂದು ನನಗೂ ಮಾತನಾಡಲಿಕ್ಕೆ ಬಿಡಿ ಎಂದು ತಾನು ಮಾತನಾಡಲು ಆರಂಭಿಸಿದಳು.

ಈ ಸಂವಾದ ನನ್ನ ಅಂತರಂಗವನ್ನು ಪ್ರಚೋದಿಸಿ ಹೊಸ ಚಿಂತನೆಯನ್ನು ಹುಟ್ಟು ಹಾಕಿತು. ಅಪೇಕ್ಷಿತ ಸಂಬಳದಂತಹ ಒಂದು ಸಣ್ಣ ವ್ಯವಹಾರಿಕ ವಿಷಯವನ್ನು ಸರಿಯಾಗಿ ಊಹಿಸುವದು ಕಷ್ಟಸಾಧ್ಯ. ನನ್ನ ಅರ್ಹತೆ, ಅನುಭವವನ್ನು ಒರೆಗಲ್ಲಿಗೆ ಹಚ್ಚಿ ಸಂಬಳ ನಿಗದಿ ಪಡಿಸಲು ಬಾಹ್ಯ ಪರಿಣತರ ಅತಿ ಅವಶ್ಯಕತೆ ಇದೆ. ಅಂದ ಮೇಲೆ ಅಗೋಚರವಾದ ಆತ್ಮಶಕ್ತಿಯ ಸರಿಯಾದ ಮೌಲ್ಯಮಾಪನ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿತು. ಈ ಶಕ್ತಿಯ ಕಡಿಮೆ ಅಂದಾಜು ಮಾಡಿದರೂ ನಷ್ಟ , ಉತ್ಪ್ರೇಕ್ಷಿಸಿ ಅಂದಾಜು ಮಾಡಿದರೂ ಕಷ್ಟ. ಈ ಉಭಯ ಸಂಕಟದಿಂದ ಪಾರು ಮಾಡುವವನೇ ನಿಜವಾದ ಗುರು. ನಮ್ಮ ನಿಜವಾದ ಸಾಮರ್ಥ್ಯದ ಅರಿವು ಮೂಡಿಸಿ ಜೀವನವನ್ನು ಯಶಸ್ವಿಯಾಗಿ ನಿರ್ವಹಿಸಲು ಕಾರಣಕರ್ತನಗುತ್ತಾನೆ. ಅದಕ್ಕೆಂದೇ ದಾಸರು “ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ”ಎಂದು ಗುರುವಿನ ಮಹಿಮೆಯನ್ನು ಕೊಂಡಾಡಿದ್ದಾರೆ.

“ತರಕಾರಿ , Skype ಮುಖಾಂತರ ಬರಂಗಿಲ್ಲ. ಮಾರ್ಕೆಟ್ ಗೆ ಹೋಗಿ ತೆಗೆದುಕೊಂಡು ಬನ್ನಿ ”ಎಂದು ಎಚ್ಚರಿಸಿದಳು.

“ಗುರುವಿನ ಗುಲಾಮ ಆಮೇಲೆ, ಮೊದಲು ಹೆಂಡತಿಯ ಗುಲಾಮನಾಗು “ ಎಂದು ಸ್ವಗತ ಹೇಳುತ್ತಾ ಪೇಟೆಯ ಕಡೆ ಹೊರಟೆ.

Read also  Dating : Beneath

What do you think?

22 Points
Upvote Downvote

Laisser un commentaire

Votre adresse e-mail ne sera pas publiée. Les champs obligatoires sont indiqués avec *

Dating : *Stuck with You* Guitar Chords Huey Lewis

Dating : 4 Reasons We Won’t Be Compatible Long-Term